ಅಟ್ಲಿ, ಕ್ಲೆಮೆಂಟ್ ಆರ್

ಇಂಗ್ಲೆಂಡಿನ ಪ್ರಧಾನಿಯಾಗಿದ್ದ ಕಾರ್ಮಿಕ ಮುಖಂಡ. ಮಧ್ಯಮವರ್ಗದ ಮನೆತನವೊಂದರಲ್ಲಿ ಹುಟ್ಟಿ ಹೆಸರಾಂತ ಹೇಲ್‍ಬರಿ ಕಾಲೇಜು, ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗಮಾಡಿ ಆಧುನಿಕ ಇತಿಹಾಸದಲ್ಲಿ ಪದವೀಧರರಾದರು. ಕಾನೂನನ್ನು ಅಭ್ಯಾಸಮಾಡಿ 1905ರಲ್ಲಿ ವಕೀಲರಾದರು. ಮುಂದೆ ನಾಲ್ಕುವರ್ಷ ವಕೀಲಿ ವೃತ್ತಿಯ ಸಮಯದಲ್ಲಿ ಹೇಲ್‍ಬರಿಯ ಸಾಮಾಜಿಕ ಪರಿಸ್ಥಿತಿಯನ್ನು ಪ್ರತ್ಯಕ್ಷಕಂಡು ಅವರ ದಾರಿದ್ರ್ಯದ ಅರ್ಥವನ್ನು ಅರಿತು ಕೊಂಡರು. ಮೊದಲ ವಿಶ್ವಸಂಗ್ರಾಮದಲ್ಲಿ ಒಂದು ವರ್ಷ ಸೇನಾಸೇವೆ ಸಲ್ಲಿಸಿ 1922ರ ತನಕ ದೀನದಲಿತರ ಉದ್ಧಾರದಲ್ಲಿ ತೊಡಗಿದರು. 1913ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಸಮಾಜ ವಿಜ್ಞಾನದ ಅಧ್ಯಾಪಕರಾಗಿ ಸೇರಿ 1923ರ ತನಕ ಸೇವೆಸಲ್ಲಿಸಿದರು. ಮೊದಲ ವಿಶ್ವಯುದ್ಧದಲ್ಲಿ ಭಾಗವಹಿಸಿದ ಅನಂತರ ಫ್ರಾನ್ಸಿಗೆ ಮರಳಿ ಅಲ್ಲಿ ಮೇಜರ್ ಹುದ್ದೆಗೇರಿದರು. 1913ರಲ್ಲಿ ಲಂಡನ್ನಿನ ಪೂರ್ವದ ಕೊನೆಗಿರುವ ಸ್ಟೆಪ್ನೆಯ ಮೇಜರ್ ಆದ ಅಟ್ಲಿ 1921ರಲ್ಲಿ ಲೇಮ್ ಹೌಸಿನಿಂದ ಪಾರ್ಲಿಮೆಂಟ್ ಸದಸ್ಯರಾಗಿ ಆರಿಸಿಬಂದರು. 1923ರಲ್ಲಿ ಮರಳಿ ಕಾಮನ್ಸ್‍ಸಭೆಗೆ ಆರಿಸಿಬಂದು 1924ರಲ್ಲಿ ರಾಮಸೇ ಮೆಕ್‍ಡೋನಾಲ್ಡ್ ಮೊದಲಬಾರಿಗೆ ರಚಿಸಿದ ಕಾರ್ಮಿಕಪಕ್ಷದ ಮಂತ್ರಿಮಂಡಲದಲ್ಲಿ ಯುದ್ಧಖಾತೆಯ ಕಾರ್ಯದರ್ಶಿಯಾಗಿ ಕೆಲಸಮಾಡಿದರು. 1927-28ರಲ್ಲಿ ಭಾರತ ಮತ್ತು ಬರ್ಮಾಗಳಲ್ಲಿ ಅಧಿಕಾರಿಯಾಗಿದ್ದು 1929ರಲ್ಲಿ ಮತ್ತೆ ಕಾರ್ಮಿಕಪಕ್ಷದ ಆಡಳಿತವನ್ನು ವಹಿಸಿಕೊಂಡರು. 1931ರ ಮೆಕ್‍ಡೋನಾಲ್ಡ್ ಇವರನ್ನು ಪೋಸ್ಟ್‍ಮಾಸ್ಟರ್ ಜನರಲ್ ಆಗಿ ನೇಮಿಸಿದರು. 1932ರಲ್ಲಿ ಮತ್ತೆ ಕಾರ್ಮಿಕಪಕ್ಷ ಪರಾಭವಗೊಂಡಿತು. ಅಟ್ಲಿ ಕಾಮನ್ಸ್ ಸಭೆಯಲ್ಲಿ ತಮ್ಮ ಸ್ಥಾನವನ್ನುಳಿಸಿಕೊಂಡು 1935ರಲ್ಲಿ ಕಾರ್ಮಿಕಪಕ್ಷದ ನಾಯಕರಾದರು.

ಎರಡನೆಯ ಮಹಾ ಯುದ್ಧಾವಧಿಯಲ್ಲಿ ಚರ್ಚಿಲ್ಲರ ಸಂಯುಕ್ತಮಂತ್ರಿಮಂಡಲದ ಲಾರ್ಡ್ ಪ್ರೀವಿಸೀಲ್ ಆಗಿಯೂ 1942ರಲ್ಲಿ ಡೆಪ್ಯೂಟಿ ಪ್ರಧಾನ ಮಂತ್ರಿಗಳಾಗಿಯೂ ಮತ್ತು ಗಡಿ ವ್ಯವಹಾರಶಾಖೆಯ ಕಾರ್ಯದರ್ಶಿಗಳಾಗಿಯೂ ನೇಮಿತಗೊಂಡರು. 1943ರಲ್ಲಿ ಕೌನ್ಸಿಲ್‍ನ ಅಧ್ಯಕ್ಷರಾದರು. ಸ್ಯಾನ್‍ಫ್ರಾನ್‍ಸಿಸ್ಕೋವಿನಲ್ಲಿ 1945ರಲ್ಲಿ ನಡೆದ ಅಂತರರಾಷ್ಟ್ರೀಯ ವ್ಯವಸ್ಥೆಯ ಸಲುವಾಗಿ ಸೇರಿದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಬ್ರಿಟಿಷ್ ಪ್ರತಿನಿಧಿಯಾಗಿದ್ದರು. ಅದೇ ಮೇ ಮಾಹೆಯಲ್ಲಿ ಜರ್ಮನಿ ಸೋತಕೂಡಲೆ ತಮ್ಮ ಮಂತ್ರಿಪದವಿಯನ್ನು ಬಿಟ್ಟುಕೊಟ್ಟು ಮುಂಬರಲಿದ್ದ ಚುನಾವಣಾ ಪ್ರಚಾರಕ್ಕಾಗಿ ಇಂಗ್ಲೆಂಡಿಗೆ ಹಿಂತಿರುಗಿದರು. ಜುಲೈ 17ರಂದು ನಡೆದ ಪಾಟ್ಸ್ ಡ್ಯಾಮ್ ಸಮ್ಮೇಳನದಲ್ಲಿ ಭಾಗವಹಿಸಲು ಚರ್ಚಿಲರು ಅಟ್ಲಿಯವರನ್ನು ಆಹ್ವಾನಿಸಿದರು. ಬ್ರಿಟನ್ನಿನ ಒಬ್ಬ ವಿರೋಧಪಕ್ಷದ ನಾಯಕ ಇಂಥ ಸಮ್ಮೇಳನದಲ್ಲಿ ಭಾಗವಹಿಸಿದುದು ಅದೇ ಮೊದಲ ಬಾರಿ. 1945ರಲ್ಲಿ ಲೇಬರ್‍ಪಕ್ಷ ಪ್ರಚಂಡ ಬಹುಮತದಿಂದ ಆರಿಸಿಬಂದು ಆಟ್ಲಿ ಪ್ರಧಾನಿಪಟ್ಟಕ್ಕೆ ಬಂದರು. ಯುದ್ಧದ ಭಯಪೂರಿತ ವಾತಾವರಣದಲ್ಲಿದ್ದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿ, ವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆಬಾರದ ರೀತಿಯಲ್ಲಿ ಸಮಾಜವಾದಿ ತತ್ವಕ್ಕನುಸಾರವಾಗಿ ಸರ್ಕಾರವನ್ನು ರೂಪಿಸುವುದೇ ಅವರ ಮುಂದಿದ್ದ ದೊಡ್ಡ ಯೋಜನೆ. ಅಟ್ಲಿಯವರ ಅಧಿಕಾರಾವಧಿಯಲ್ಲಿ ಇಂಗ್ಲೆಂಡಿನ ಬ್ಯಾಂಕು, ಕಲ್ಲಿದ್ದಲು ತೆಗೆಯುವ ಗಣಿಗಳು, ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು, ಸಾರಿಗೆ ಸಂಬಂಧ ಮುಂತಾದುವು ರಾಷ್ಟ್ರೀಕರಣಗೊಂಡುವು. 1946ರ ಆರೋಗ್ಯ ಸೇವಾ ನಿಬಂಧನೆ 1948ರಲ್ಲಿ ಜಾರಿಗೆ ಬಂದು ಪ್ರತಿಯೊಬ್ಬ ಪ್ರಜೆಗೂ ವೈದ್ಯಕೀಯ ಸವಲತ್ತುಗಳು ಉಚಿತವಾದಾಗ ಮೊದಮೊದಲಿಗೆ ಅಟ್ಲಿ ಪ್ರಬಲ ವಿರೋಧನ್ನು ಎದುರಿಸಬೇಕಾಯಿತು. 1948ರ ಸಾಮಾಜಿಕ ಕ್ಷೇಮನಿಬಂಧನೆಯ ಅನ್ವಯದಿಂದ ಸಾಮಾಜಿಕ ಕ್ಷೇಮ ಹೆಚ್ಚಿತು. ವಿಲ್ ಅಂಡ್ ವೇ ಟು ಸೋಷಿಯಲಿಸಮ್ ಮತ್ತು ದಿ ಲೇಬರ್ ಪಾರ್ಟಿ ಇನ್ ಪರ್ಸ್ಪೆಕ್ಟಿವ್ ಎಂಬ ಗ್ರಂಥಗಳನ್ನು ಅಟ್ಲಿ ಬರೆದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದು ಮತ್ತು ಪಾಕಿಸ್ತಾನ ರೂಪುಗೊಂಡದ್ದು ಇವರು ಪ್ರಧಾನಿಯಾಗಿದ್ದಾಗ (1947).							     
(ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ